Posted by: ರಮ್ಯ | January 24, 2012

ಹವಾ ‘ಹವಾಯಿ’ – ಭಾಗ ೨

‘ಬಿಗ್ ಐಲೆಂಡ್’ ಹೆಸರೇ ಸೂಚಿಸುವಂತೆ ಹವಾಯಿ ದ್ವೀಪ ಗಳಲ್ಲೆಲ್ಲ ಅತೀ ದೊಡ್ಡದು. ಇದು ಅಮೇರಿಕಾದ (USA) ದೊಡ್ಡ ದ್ವೀಪವೂ ಸಹ. ಸುಮಾರು 2,30,000 ಎಕರೆ ಇರುವ ‘ಹವಾಯಿ ವೋಲ್ಕೆನೋ ನ್ಯಾಷನಲ್ ಪಾರ್ಕ್’ ಇಲ್ಲಿನ ಪ್ರಮುಖ ಆಕರ್ಷಣೆ.

ಮೊದಲ ದಿನ ನಮ್ಮ ಪ್ರಯಾಣ ‘ಹವಾಯಿ ವೋಲ್ಕೆನೋ ನ್ಯಾಷನಲ್ ಪಾರ್ಕ್’ ನತ್ತ. ವಿಸಿಟರ್ ಸೆಂಟರ್ ನಲ್ಲಿ ಸ್ವಲ್ಪ ಮಾಹಿತಿ ಪಡೆದು ಪಾರ್ಕ್ ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ‘ಚೈನ್ ಆಫ್ ಕ್ರೆಟರ್ಸ್ ರೋಡ್’ (Chain of Craters Road) ನಲ್ಲಿ ಹೊರಟೆವು. ಲಾವಾದ ಅವಶೇಷಗಳ ನಡುವೆ 11 ಮೈಲು ಸಾಗುವ ಈ ದಾರಿ ಸಮುದ್ರ ಮಟ್ಟದವರೆಗೆ ಕರೆದೊಯುತ್ತದೆ. 2008ರಲ್ಲಿ ಹರಿದ ಲಾವಾ ಅಲ್ಲಿ ರಸ್ತೆಯನ್ನು ನಾಶ ಮಾಡಿದೆ.

ರೋಡಿಗೆ ಬಂದ ಲಾವಾ


'ವೋಲ್ಕೆನೋ' ಆರ್ಚ್


Thurston ಲಾವಾ ಟ್ಯೂಬ್ ನೋಡಿ ಹೊರಟಾಗ ಸಂಜೆಯಾಗಿತ್ತು.

Thurston ಲಾವಾ ಟ್ಯೂಬ್


ಅಲ್ಲಿಂದ Jaggar ಮ್ಯೂಸಿಯಂಗೆ ಹೋದಾಗ ಆಗಲೇ ಅಲ್ಲಿ ತುಂಬಾ ಜನ ಸೇರಿದ್ದರು. ಅದು ‘Kilauea volcano’ ವೀಕ್ಷಣೆಗೆ ಸೂಕ್ತ ಜಾಗ. (Halemaumau Crater Lookout)

‘Kilauea volcano’ ಪ್ರಪಂಚದ ಕೆಲವೇ ಜೀವಂತ ಅಗ್ನಿಪರ್ವತಗಳಲ್ಲಿ ಇದೂ ಒಂದು. ಜನವರಿ 1983ರಿಂದ ಸಿಡಿಯುತ್ತಿರುವ ಈ ಅಗ್ನಿಪರ್ವತ ಸುಮಾರು 16,000 ಎಕರೆ ಜಾಗವನ್ನು ಆವರಿಸಿದೆ. ಅನೇಕ ಮನೆಗಳನ್ನೂ, ಸಾವಿರಾರು ಎಕರೆ ಅರಣ್ಯವನ್ನೂ ನಾಶ ಮಾಡಿದೆ. ಇದರಿಂದ ಹರಿದ ‘ಲಾವಾ’ ಸುಮಾರು 560 ಎಕರೆಗಳಷ್ಟು ಜಾಗವನ್ನು ‘ಬಿಗ್ ಐಲ್ಯಾಂಡ್’ ಗೆ ಸೇರಿಸಿದೆ.

View from 'Halemaumau Crater Lookout'


ಇದರಲ್ಲಿ ಅಗ್ನಿ ದೇವತೆ ‘ಪೀಲೆ’(Pele) ನೆಲೆಸಿದ್ದಾಳೆ ಎಂದು ಹವಾಯಿ ಜನರ ನಂಬಿಕೆ. ಅಲ್ಲಿಗೆ ಬಂದ ಶಾಲಾ ಮಕ್ಕಳ ಗುಂಪೊಂದು ‘ಪೀಲೆ’ಗೆ ಪ್ರಾರ್ಥನೆ ಸಲ್ಲಿಸಿತ್ತು.(ಹವಾಯಿ ಹಾಡು ಇಲ್ಲಿ ಕೇಳಿ) 2-3 ಗಂಟೆ ವೋಲ್ಕೆನೋ ನೋಡಿ ಹೋಟೆಲ್ ಗೆ ವಾಪಸಾದಾಗ ರಾತ್ರಿ 12 ಗಂಟೆಯಾಗಿತ್ತು.

ಎರಡನೇ ದಿನ ಕೆಲವು ಬೀಚ್ ಹಾಗು ಪಾರ್ಕ್ ಗಳನ್ನು ನೋಡಿ ‘ಚೈನ್ ಆಫ್ ಕ್ರೆಟರ್ಸ್ ರೋಡ್’ನ ಮತ್ತೊಂದು ತುದಿ ತಲುಪಿದೆವು. 1990 ರಲ್ಲಿ ಹರಿದ ಲಾವಾ ‘ಕಲಪನ’(Kalapana Village) ಊರನ್ನು ನಾಶ ಮಾಡಿದೆ. ಸುಮಾರು 50 ಅಡಿ ಲಾವಾ ಮೇಲೆ ಕಟ್ಟಿದ ಕೆಲವು ಮನೆಗಳನ್ನೂ ಈಗಲ್ಲಿ ಕಾಣಬಹುದು.

'ವೋಲ್ಕೆನೋ' ಅವಶೇಷಗಳ ನಡುವೆ(ಮೇಲೆ) ಮನೆಗಳು


ಅಲ್ಲಿ ಒಂದು ನೇರಳೆ(?) ಮರವೂ ಇತ್ತು. ದೈರ್ಯ ಮಾಡಿ 5-6 ಹಣ್ಣು ಕಿತ್ತು ತಿಂದು ಅದು ‘ನೇರಳೆ’ ಹಣ್ಣೆ ಎಂದು confirm ಮಾಡಿಕೊಂಡು ಅಲ್ಲಿಂದ ಹೊರಟೆವು.

3.30ಕ್ಕೆ ‘ವೋಲ್ಕೆನೋ ಹೆಲಿಕಾಪ್ಟರ್ ಟೂರ್’ಗೆ ಹೋಗಬೇಕಿತ್ತು. ಹೆಲಿಪ್ಯಾಡ್ ದಾರಿ ಹಿಡಿದೆವು. ಅಷ್ಟರಲ್ಲಿ ಫೋನ್ ರಿಂಗ್ ಆಗಿತ್ತು. ಹವಾಮಾನ ವೈಪರಿತ್ಯ ದಿಂದಾಗಿ ನಾವು ಹೋಗಬೇಕಿರುವ ಹೆಲಿಕಾಪ್ಟರ್ ರದ್ದಾಗಿದೆ ಎಂದು ತಿಳಿದಾಗ ನಿರಾಸೆಯಾಗಿತ್ತು. ಬೇರೆ ದಾರಿ ಇರಲಿಲ್ಲ. ಹೆಲಿಕಾಪ್ಟರ್ ನಲ್ಲಿ ವೋಲ್ಕೆನೋ ನೋಡುವ ಆಸೆ ಬಿಟ್ಟು ಸಮೀಪದಲ್ಲಿದ್ದ ‘Mauna Loa’ ಮಕಡಮೆಯ ನಟ್ ಫ್ಯಾಕ್ಟರಿಗೆ ಹೋದೆವು. ಅಲ್ಲಿ ಮೊದಲ ಬಾರಿ ಸಮುದ್ರ ಜೀವಿಯ ಒಳಗೆ ಇರುವ ‘ಮುತ್ತಿನ’ ದರ್ಶನವಾಯ್ತು.

ಸಮುದ್ರ ಜೀವಿಯ ಒಳಗೆ ಇರುವ 'ಮುತ್ತು'

7 ದಿನಗಳ ಹವಾಯಿ ಪ್ರವಾಸ ಮುಗಿಸಿ ರಾತ್ರಿ 12 ಗಂಟೆಗೆ ಫ್ಲೈಟ್ ಹತ್ತಿದಾಗ ಮನಸ್ಸಿನ್ನೂ ‘ವೋಲ್ಕೆನೋ’ ಸುತ್ತ ಸುತ್ತುತ್ತಿತ್ತು.

ಹೆಚ್ಚಿನ ಫೋಟೋಗಳನ್ನು ಇಲ್ಲಿ ನೋಡಿ Hawaii photos

Posted by: ರಮ್ಯ | January 11, 2012

ಹವಾ ‘ಹವಾಯಿ’ – ಭಾಗ ೧

ಅಮೇರಿಕ(USA)ದ ೫೦ ರಾಜ್ಯಗಳಲ್ಲಿ ‘ಹವಾಯಿ’ಯೂ ಒಂದು. ಹವಾಯಿ ಪೆಸಿಫಿಕ್ ಸಮುದ್ರದ ಮದ್ಯಭಾಗದಲ್ಲಿರುವ ದ್ವೀಪ ಸಮೂಹ. Kauai, Oahu, Maui, Big Island ಇವು ನಾಲ್ಕು ಪ್ರಮುಖ ದ್ವೀಪಗಳು.

ಫೆಬ್ರುವರಿ 2011 ಏಳು ದಿನಗಳ ಪ್ರವಾಸಕ್ಕಾಗಿ ಹವಾಯಿಗೆ ಹೊರಟೆವು. ಮಾಯಿ(Maui) ಮತ್ತು ಬಿಗ್ ಐಲೆಂಡ್ ಗೆ ಬೇಟಿಕೊಡುವುದೆಂದು ನಿರ್ಧರಿಸಿದ್ದೆವು. ಸ್ಯಾನ್ ಫ್ರಾನ್ಸಿಸ್ಕೋ ದಿಂದ ಸುಮಾರು ಐದು ಗಂಟೆ ಪ್ರಯಾಣ. ಹವಾಯಿ ಸಮಯಕ್ಕೂ ನಮಗೂ(PST) ಎರಡು ಗಂಟೆ ವ್ಯತ್ಯಾಸ. ಮೊದಲು ಬೇಟಿ ಕೊಟ್ಟಿದ್ದು ಮಾಯಿ(Maui). ಏರ್ಪೋರ್ಟ್ ನಿಂದ ಕಾರ್ ರೆಂಟಲ್ ಪಡೆಯಲು ಹೋದಾಗ ಅಲ್ಲಿ ಕೋಳಿಗಳನ್ನು ನೋಡಿ ಆಶ್ಚರ್ಯವಾಗಿತ್ತು. ಅಲ್ಲಿ ಕೋಳಿಗಳು ಸ್ವಚಂದವಾಗಿ ಓಡಾಡಿಕೊಂಡಿದ್ದವು. ಇದುವರೆಗೂ ಅಮೇರಿಕಾದಲ್ಲಿ ಎಲ್ಲೂ ಇಂತಹ ದೃಶ್ಯ ಕಂಡಿರಲಿಲ್ಲ. ಕಾರ್ ರೆಂಟಲ್ ಪಡೆಯಲು ಬಂದ ಅನೇಕರು ಕೋಳಿಗಳ ಫೋಟೋ ತೆಗೆಯುವುದರಲ್ಲಿ ನಿರತರಾಗಿದ್ದರು.

ಕಾರ್ ಪಡೆದುಕೊಂಡು ಸಮೀಪದಲ್ಲಿದ್ದ kmart ನಲ್ಲಿ ನಮಗೆ ಅಗತ್ಯವಿದ್ದ ವಸ್ತುಗಳನ್ನು ತುಂಬಿಕೊಂಡ ನಂತರ ನಮ್ಮ ಹವಾಯಿ ತಿರುಗಾಟ ಶುರುವಾಯ್ತು. ಪಿಜ್ಜಾ, ಬರ್ಗರ್, ಸ್ಯಾಂಡ್ ವಿಚ್ ಇಷ್ಟ ಪಡದ ನನಗೆ ಅಲ್ಲಿರುವ ಏಳು ದಿನ ಬ್ರೆಡ್, ಜಾಮ್, ಜೂಸ್ ಗಳ ಮೃಷ್ಟಾನ್ನ ಭೋಜನ.smile emoticon

‘ಪ್ರವಾಸೋದ್ಯಮ’ ಹವಾಯಿಯ ಆದಾಯದ ಮೂಲ. ನೈಸರ್ಗಿಕ ಕಾಡುಗಳು, ಬೀಚ್ ಗಳು, ಅಗ್ನಿಪರ್ವತಗಳು ಪ್ರಮುಖ ಆಕರ್ಷಣೆಗಳು. ಅಮೆರಿಕಾದ ಇತರ ರಾಜ್ಯಗಳಿಗಿಂತ ಹವಾಯಿ ಭಿನ್ನವಾಗಿತ್ತು. ಕಣಗಿಲೆ, ಕರವೀರ, ಚದುರಂಗ  ಹೂಗಳೂ, ಪೇರಳೆ, ಪಪ್ಪಾಯಿ, ಬಾಳೆ, ಪರಂಗಿ, ನೇರಳೆ ಮರಗಳೂ, ಜಿನುಗುತ್ತಿರುವ ಮಳೆ ಅಮೇರಿಕಾದಲ್ಲೇ ‘ಊರಿಗೆ’ ಹೋದಂತ ಅನುಭವ ಕೊಟ್ಟಿತ್ತು. ನಮ್ಮ ಅದೃಷ್ಟಕ್ಕೆ ಅಲ್ಲೇ ಒಂದು ಭಾರತೀಯ ರೆಸ್ಟೋರೆಂಟ್ ಸಿಕ್ಕಿತ್ತು. (ಒಂದು ಹೊತ್ತು ಬ್ರೆಡ್ ಜಾಮ್ ನಿಂದ ಮುಕ್ತಿ). ನಂತರ ಸಮೀಪದಲ್ಲಿದ್ದ ಕೆಲವು ಬೀಚ್ ಗಳಿಗೆ ಹೋಗಿ ‘ಸೂರ್ಯ ಸ್ನಾನsmile emoticon‘ ಮಾಡಿ ಹೋಟೆಲ್ ಗೆ ವಾಪಾಸಾಗಿದ್ದೆವು.

ಮೊದಲ ದಿನ ನಮ್ಮ ಪ್ರಯಾಣ ‘ರೋಡ್ ಟು ಹಾನ’ ಕ್ಕೆ. 42 ಮೈಲುಗಳ ಹಾನಾ ಹೈವೆ 500ಕ್ಕೂ ಹೆಚ್ಚು ತಿರುವುಗಳನ್ನೂ, 50ಕ್ಕೂ ಹೆಚ್ಚು ಒಂದು lane ಬ್ರಿಡ್ಜ್ ಗಳನ್ನೂ ಹೊಂದಿದೆ. ನೈಸರ್ಗಿಕ ಕಾಡುಗಳು, ಕಿರಿದಾದ ರಸ್ತೆಗಳು, ಜಲಪಾತಗಳು, ಸಮುದ್ರದ ರಮಣೀಯ ದೃಶ್ಯಗಳಿಗಾಗಿ ಪ್ರಸಿದ್ದ. ಆಧುನಿಕತೆಯಿಂದ ದೂರ ಉಳಿದಿದೆ. ಕೆಲವು ಚಿಕ್ಕ ಅಂಗಡಿಗಳನ್ನು ಬಿಟ್ಟರೆ ಬೇರೇನೂ ಕಾಣುವುದಿಲ್ಲ.

ಹಾನಾ ದಾರಿಯಲ್ಲಿ

ಎರಡನೇ ದಿನ ಮಾಲ್ ನಲ್ಲಿ ‘ಹೂಲ’(hula) ಡಾನ್ಸ್ ನೋಡುವ ಅವಕಾಶ ಸಿಕ್ತು. ‘ಹೂಲ’ ಹವಾಯಿಯ ಸಾಂಪ್ರದಾಯಿಕ ನೃತ್ಯ. ಅಲ್ಲಿಂದ ನೇರವಾಗಿ ಹೋಗಿದ್ದು ಮೊದಲೇ ಬುಕ್ ಮಾಡಿದ್ದ ‘ತಿಮಿಂಗಿಲ ದರ್ಶನಕ್ಕೆ’ (Whale watching).

ಬೋಟ್ನಲ್ಲಿ ಸುಮಾರು ೨ ಗಂಟೆ ಪ್ರಯಾಣದಲ್ಲಿ  ತಿಮಿಂಗಿಲಗಳನ್ನು ತೋರಿಸುತ್ತ, ಅವುಗಳ ಬಗ್ಗೆ ವಿವರವಾಗಿ ಮಾಹಿತಿ ನೀಡುತ್ತ ಸಾಗುತ್ತಾರೆ. ಅಲ್ಲಿ ಹೇಳಿದ ಕೆಲವು ಮಾಹಿತಿಗಳು.

  • ಈ ತಿಮಿಂಗಿಲಗಳು(Humpback whales) ಚಳಿಗಾಲ ಪ್ರಾರಂಭವಾಗುವುದಕ್ಕೆ ಮೊದಲು ಅಲಾಸ್ಕ(Alaska)ದಿಂದ ವಲಸೆ ಹೊರಡುತ್ತವೆ. ಇವುಗಳಲ್ಲಿ ಹೆಚ್ಚಿನವು(60%) ಹವಾಯಿಗೆ ಬಂದರೆ ಉಳಿದವು ಮೆಕ್ಸಿಕೋ (coast of Baja in Mexico) ಹಾಗೂ ಜಪಾನ್(islands south east of Japan) ಕಡೆ ಹೋಗುತ್ತವೆ.
  • 6 ರಿಂದ 8 ವಾರ ಪ್ರಯಾಣ ಮಾಡಿ ಅಲಾಸ್ಕದಿಂದ ಸುಮಾರು 3500 ಮೈಲು ದೂರದಲ್ಲಿರುವ ಹವಾಯಿ ತಲುಪುತ್ತವೆ.
  • ಸುಮಾರು 40 ಟನ್ ತೂಕ ಹಾಗು 40-45 ಅಡಿ ಉದ್ದ ಇರುತ್ತವೆ.
  • ಏಪ್ರಿಲ್ ನಲ್ಲಿ ಮತ್ತೆ ಅಲಾಸ್ಕಕ್ಕೆ ವಾಪಾಸಾಗುತ್ತವೆ. ಹವಾಯಿ ಪೆಸಿಫಿಕ್ ಸಮುದ್ರದ ಮದ್ಯದಲ್ಲಿರುವುದೂ, ಸತ್ವರಹಿತವಾದ ನೀರು(ಇದೇ ಕಾರಣಕ್ಕೆ ಇಲ್ಲಿನ ಸಮುದ್ರದ ನೀರು ತಿಳಿ ನೀಲಿಯಾಗಿರುತ್ತದೆ) ಇವುಗಳಿಗೆ ವರ್ಷಪೂರ್ತಿ ಆಹಾರ ಒದಗಿಸುವಲ್ಲಿ ವಿಫಲವಾಗಿದೆ. ಒಂದು ತಿಮಿಂಗಿಲಕ್ಕೆ ದಿನಕ್ಕೆ ಸುಮಾರು 900 kg ಗಿಂತ ಜಾಸ್ತಿ ಆಹಾರ ಬೇಕು.
  • ಹವಾಯಿಯಲ್ಲಿರುವ 4 ರಿಂದ 6 ತಿಂಗಳು ಇವು ಉಪವಾಸ ಇರುತ್ತವೆ.

ತಿಮಿಂಗಿಲ!!

ಮೂರನೇ ದಿನ ಬೆಳಿಗ್ಗೆ ಬೇಗ ಎದ್ದು ಬಹಳ ದಿನಗಳಿಂದ ಎದುರು ನೋಡುತ್ತಿದ್ದ ‘snorkeling’ ಗೆ ಹೋದೆವು. ಬೋಟ್ ನಲ್ಲಿ ನಮ್ಮನ್ನು ಚಿಕ್ಕ ದ್ವೀಪ ‘ಮೂಲೋಕಿನಿ’ (Molokini)ಗೆ ಕರೆದೊಯ್ದರು. ಹವಾಯಿ ಯಲ್ಲಿ ಸುಮಾರು 120 ಜಾತಿಯ ಮೀನುಗಳನ್ನು ಕಾಣಬಹುದು. ‘ಮೂಲೋಕಿನಿ’ ವಿವಿಧ ಬಗೆಯ ಜಲಚರಗಳಿಂದ ಸಮೃದ್ದವಾಗಿರುವುದೂ, ತಿಳಿ ನೀರು snorkeling ಮತ್ತು scuba ಗೆ ತುಂಬಾ ಪ್ರಶಸ್ತವಾಗಿದೆ. ಹೊಸ ಅನುಭವ ಪಡೆಯುವ ಹುಮ್ಮಸ್ಸಿನಲ್ಲಿ ಅಗತ್ಯವಿರುವ equipment ಧರಿಸಿ ತಯಾರಾದೆವು. ಈಜು ಬರದಿದ್ದರೂ ಚಳಿ (ಭಯ) ಬಿಟ್ಟು ನೀರಿಗಿಳಿದೆವು.(ಮನೆಗೆ ಬಂದು ಒಂದು ವಾರ ಜ್ವರದಿಂದ ಮಲಗಿದ್ದು ಬೇರೇ ವಿಷಯsmile emoticon) ಚಿಕ್ಕ ಮಕ್ಕಳಿಗೂ ಈಜು ಬರುವ ಈ ದೇಶದಲ್ಲಿ ಈಜು ಬರದ ನಾವು ಅಲ್ಪಸಂಖ್ಯಾತರಾಗಿದ್ದೆವು. 4-5 ಜನ instructors ಅಗತ್ಯವಿದ್ದಲ್ಲಿ ಸಹಾಯಕ್ಕೆ ರೆಡಿ ಇದ್ದರು.(ಅದೇ ದೈರ್ಯsmile emoticon). ವಿವಿಧ ಜಾತಿಯ, ಆಕಾರದ, ಬಣ್ಣದ ಮೀನುಗಳು. ಸಮುದ್ರದ ತಳದಲ್ಲಿ ಗೋಚರಿಸುವ ವಿವಿಧ ಬಗೆಯ ಸಸ್ಯಗಳು. ನೋಡುತ್ತಾ ನೋಡುತ್ತಾ ಬೋಟ್ ನಿಂದ ಸುಮಾರು ದೂರ ಹೋಗಿ ಆಗಿತ್ತು. ಸಮಯ ಹೋಗಿದ್ದೇ ತಿಳಿಯಲಿಲ್ಲ. ಅಲ್ಲಿಂದ ಮತ್ತೆ ಬೋಟ್ ನಲ್ಲಿ ‘turtle town’ ಗೆ ಕರೆದೊಯ್ದರು. ಅಲ್ಲಿ ಮತ್ತೆ ನೀರಿಗಿಳಿದು ‘ದೈತ್ಯ ಆಮೆ’(Hawaiian green sea turtle)ಗಳನ್ನು ನೋಡಿದೆವು. ವಾಪಾಸಾದಾಗ ಮದ್ಯಾಹ್ನ ಒಂದು ಗಂಟೆಯಾಗಿತ್ತು.

Molokini

'ಮೂಲೋಕಿನಿ' (Photo: Ron Garnett/HTA)

ಅಲ್ಲಿಂದ ‘ಹಲೆಯಕಾಲ(Haleakala) ನ್ಯಾಷನಲ್ ಪಾರ್ಕ್’ ಗೆ ಹೊರಟೆವು. 30,000 ಎಕರೆ ಇರುವ ಹಲೆಯಕಾಲ ನ್ಯಾಷನಲ್ ಪಾರ್ಕ್ ಸಮುದ್ರ ಮಟ್ಟದಿಂದ 10,023 ಅಡಿ ಎತ್ತರದಲ್ಲಿದೆ.  ಬದಲಾಗುವ ಹವಾಮಾನದಲ್ಲಿ ಮೋಡಗಳ ನಡುವೆ ಈ ವೋಲ್ಕೆನೋ ತುದಿ ತಲುಪುವುದು ರೋಮಾಂಚಕಾರಿ ಅನುಭವ. ಸುಮಾರು 4,000,000 ವರ್ಷಗಳ ಹಿಂದೆ ಸಿಡಿದು ಶಾಂತವಾಗಿರುವ ಈ ಅಗ್ನಿಪರ್ವತ ‘ಮಾಯಿ’ಯ ಅತೀ ಎತ್ತರದ ಪ್ರದೇಶ.  ಇದಕ್ಕೆ ‘ಸೂರ್ಯನ ಮನೆ’ ಎಂದೂ ಕರೆಯುತ್ತಾರೆ. (ಹವಾಯಿ ಭಾಷೆಯಲ್ಲಿ ‘Haleakala’ ಎಂದರೆ ‘house of the sun’).

ಹಲೆಯಕಾಲ ನ್ಯಾಷನಲ್ ಪಾರ್ಕ್

ಸಂಜೆ 6 ಗಂಟೆ ಫ್ಲೈಟ್ ಗೆ ನಾವು ಬಿಗ್ ಐಲೆಂಡ್ ಗೆ ಹೋಗಬೇಕಾಗಿತ್ತು.  ’ಹಳೆಯಕಾಲ’ದಿಂದ ಸುಮಾರು 30 ಮೈಲು ದೂರ ಇರುವ ಕಾರ್ ರೆಂಟಲ್ ತಲುಪಿದಾಗ 4.45 ಆಗಿತ್ತು.

ಗಡಿಬಿಡಿಯಲ್ಲಿ ರೆಂಟಲ್ ಕಾರ್ ವಾಪಾಸು ಮಾಡಿ ನಮ್ಮ ಲಗೇಜ್ ಎತ್ತಿಕೊಂಡು ಏರ್ಪೋರ್ಟ್ ಗೆ ಹೋಗುವ ವಾಹನ ಹತ್ತಿದೆವು. ಚಾಲಕನಿಗೆ ನಾವು ಹೋಗುವ ವಿಮಾನದ ಕಂಪನಿಯ ಹೆಸರನ್ನು ತಿಳಿಸಿದೆವು. ಆಗಲೇ ಗಂಟೆ ಐದಾಗಿತ್ತು. ಏರ್ಪೋರ್ಟ್ ನ ಸೆಕ್ಯೂರಿಟಿ ಕ್ಯೂ ನೆನಪಿಸಿಕೊಂಡಾಗ ನಾವು ಫ್ಲೈಟ್ ತಪ್ಪಿಸಿಕೊಳ್ಳುವ ಸಂಭವವೇ ಹೆಚ್ಚು ಅನಿಸುತ್ತಿತ್ತು. ನಮ್ಮ ವಾಹನ ಮೈನ್ ಏರ್ಪೋರ್ಟ್ ದಾಟಿ ಮುಂದೆ ಹೋಗುತ್ತಲಿತ್ತು. ಚಾಲಕನನ್ನು ವಿಚಾರಿಸಿದಾಗ ನಿಮ್ಮ ಫ್ಲೈಟ್ ಮುಂದೆ ಸಿಗುತ್ತದೆ ಎಂದ. ನಮ್ಮ ಭಾಷೆ ಅವನಿಗೆ ಅರ್ಥವಾಗಿದೆಯೋ ಇಲ್ಲವೋ? ಅನುಮಾನವಾಯ್ತು. ’ನಮಗೆ 6 ಕ್ಕೆ ಬಿಗ್ ಐಲೆಂಡ್ ಗೆ ಹೊರಡುವ ವಿಮಾನಕ್ಕೆ ಹೋಗಬೇಕೆಂದೂ, ವಿಮಾನದ ಕಂಪನಿಯ ಹೆಸರನ್ನೂ’ ಮತ್ತೆರಡು ಬಾರಿ ಹೇಳಿದೆವು. ನಮ್ಮ ಆತಂಕ ಅರ್ಥ ಮಾಡಿಕೊಂಡ ಅವನು ‘ನಾವು  ಹೋಗುತ್ತಿರುವುದು ೮-೯ ಜನ ಹೋಗುವ ಚಿಕ್ಕ ಫ್ಲೈಟ್ ಎಂದೂ, ಅದು ಬೇರೆ ನಿಲ್ದಾಣದಿಂದ ಹೊರಡುವುದೆಂದೂ’ ತಿಳಿಸಿದ. ಆದರೆ ನಮ್ಮ ಆತಂಕ  ಕಡಿಮೆಯಾಗಲಿಲ್ಲ. ನಮ್ಮ ನಿಲ್ದಾಣದ ಬಳಿ ವಾಹನ ನಿಲ್ಲಿಸಿದ. ಆ ನಿಲ್ದಾಣ ಬಸ್ ಸ್ಟಾಪ್ ನ್ನು ಹೋಲುವಂತಿತ್ತು. ಸರಿ ವಿಚಾರಿಸೋಣ ಎಂದು ಒಳಹೊಕ್ಕೆವು. ಅಲ್ಲಿ 4-6 ಜನ ಪ್ರಯಾಣಿಕರಿದ್ದರು. ಕೌಂಟರ್ ನಲ್ಲಿ ವಿಚಾರಿಸಿದಾಗ ನಾವು ಸರಿಯಾದ ನಿಲ್ದಾಣಕ್ಕೆ ಬಂದಿದ್ದು ಖಾತ್ರಿಯಾಯ್ತು. ನಮ್ಮ ಲಗೇಜ್ ನೊಂದಿಗೆ ನಮ್ಮನ್ನೂ ತೂಕ ಮಾಡಿsmile emoticon, ಫ್ಲೈಟ್ ಇನ್ನೂ ಬಂದಿಲ್ಲವೆಂದು ಕುಳಿತುಕೊಳ್ಳಲು ಹೇಳಿದರು. ಯಾವುದೇ ಸೆಕ್ಯೂರಿಟಿ ಚೆಕ್ ಇರಲಿಲ್ಲ. ಆಶ್ಚರ್ಯವಾದರೂ ಸದ್ಯ ನಾವು ‘ಸೇಫ್’ ಎಂದು ನೆಮ್ಮದಿಯಿಂದ ಕುಳಿತೆವು. ಅಷ್ಟರಲ್ಲಿ ವಿಮಾನ ಲ್ಯಾಂಡ್ ಆಯ್ತು. ಪೈಲೆಟ್ ಅನುಮತಿ ಪಡೆದು ಒಂದೆರಡು ಫೋಟೋನೂ ತೆಗೆದಾಯ್ತು.

ನಮ್ಮ ಫ್ಲೈಟ್..

ಮಾಯಿಯಿಂದ ಬಿಗ್ ಐಲೆಂಡ್ ಗೆ ಅರ್ಧ ಗಂಟೆ ಪ್ರಯಾಣ. ಕೇವಲ ಅರ್ಧ ಗಂಟೆ ಮುಂಚೆ ವಿಮಾನ ನಿಲ್ದಾಣ ತಲುಪಿದರೂ, ಫ್ಲೈಟ್ ಹತ್ತುವಲ್ಲಿ ಯಶಸ್ವಿಯಾಗಿದ್ದೆವು. 8 ಪ್ರಯಾಣಿಕರಿರುವ ಆ ಚಿಕ್ಕ ವಿಮಾನದಲ್ಲಿ ಜೀವ ಕೈಯಲ್ಲಿ ಹಿಡಿದು ಕುಳಿತೆವು. ಸ್ವಲ್ಪ ಸಮಯದ ನಂತರ ದೂರದಲ್ಲಿ ಬಿಗ್ ಐಲೆಂಡ್ನ ದೀಪಗಳು ಗೋಚರಿಸತೊಡಗಿದವು. ಆ ನಿಲ್ದಾಣದಲ್ಲೂ ನಮ್ಮ ಫ್ಲೈಟ್ ನವರನ್ನು ಬಿಟ್ಟರೆ ಬೇರೆ ಜನರಿರಲಿಲ್ಲ. ರೆಂಟಲ್ ಕಾರ್ ಪಡೆದು ಹೋಟೆಲ್ ತಲುಪಿದಾಗ ರಾತ್ರಿ 8.30.

ಹೆಚ್ಚಿನ ಫೋಟೋಗಳನ್ನು ಇಲ್ಲಿ ನೋಡಿ Hawaii photos

Posted by: ರಮ್ಯ | October 2, 2011

ಅಶರೀರವಾಣಿ!!

ಶಾಲೆಯಿಂದ ಮನೆಗೆ ಬಂದ ಪುಟ್ಟ ತುಂಬಾ ಖುಷಿಯಾಗಿದ್ದ. ಶಾಲಾ ವಾರ್ಷಿಕೋತ್ಸವದಲ್ಲಿ ನಡೆಯುವ ನಾಟಕದಲ್ಲಿ ಅವನೂ ಒಂದು ಪಾತ್ರ ಮಾಡುವವನಿದ್ದ. ಮನೆಯ ಎಲ್ಲರೂ ತನ್ನ ನಾಟಕ ನೋಡಲು ಬರಲೇ ಬೇಕೆಂದು ತಾಕೀತು ಮಾಡಿದ. ಎಲ್ಲರೂ ನಾಟಕ ನೋಡಲು ಹೋಗುವುದೆಂದು ನಿರ್ಧಾರವಾಯ್ತು.

ಪುಟ್ಟನದು ದೇವತೆಯ ಪಾತ್ರ. ಮನೆಯಲ್ಲಿಯೂ ರಿಹರ್ಸಲ್ ಶುರುವಾಯ್ತು.

ನಾಟಕದ ದಿನವೂ ಬಂತು. ಕಿರೀಟ, ಆಭರಣ ತೊಟ್ಟು ದೇವರ ಗೆಟಪ್ಪಿನಲ್ಲಿ ರೆಡಿಯಾದ ಪುಟ್ಟ.

ಅವಿಭಕ್ತ ಕುಟುಂಬ. ಮನೆಮಂದಿಯೆಲ್ಲ ಸಂಭ್ರಮದಿಂದ ರೆಡಿಯಾದರು. ೨-೩ ಎತ್ತಿನ ಗಾಡಿ ಕಟ್ಟಿಕೊಂಡು ೩ ಕಿ. ಮೀ ದೂರದ ಶಾಲೆಗೆ ಹೋದರು. ನಾಟಕ ಶುರುವಾಯ್ತು. ಎಷ್ಟು ಹೊತ್ತಾದರೂ ಮನೆಮಗನ ಸುಳಿವಿಲ್ಲ. ಇನ್ನೇನು ನಾಟಕ ಮುಗಿಯಿತು ಎನ್ನುವಸ್ಟರಲ್ಲಿ ಪರದೆಯ ಹಿಂದಿನಿಂದ ಪುಟ್ಟನ ದ್ವನಿ ಕೇಳಿಸಿತ್ತು. ಆಗಲೇ ಗೊತ್ತಾಗಿದ್ದು ಅವನದು ‘ಅಶರೀರವಾಣಿ ದೇವತೆ’ಯ ಪಾತ್ರ ಎಂದು. smile emoticon

Posted by: ರಮ್ಯ | July 8, 2011

ಪೂರ್ವಿಯ ಪ್ರಶ್ನೆಗಳು

‘ಚಿಕ್ಕಿ(ಚಿಕ್ಕಮ್ಮ) ಬಾಯಿಗೆ ಬಿತ್ತ ಮಗ ಕೊಡಿಸು’ ಅಕ್ಕನ ಮಗಳು ೩ ವರ್ಷದ ಪೂರ್ವಿ ನನ್ನಲ್ಲಿ ಹೇಳಿದಾಗ ಅರ್ಥವಾಗದೆ ಅಕ್ಕನ ಮುಖ ನೋಡಿದೆ.
ಅಕ್ಕ: “ಕ್ಯಾಡ್ಬರೀಸ್ ಡೈರಿ ಮಿಲ್ಕ್”
ಆಗ ನೆನಪಾಯ್ತು ‘ಕ್ಯಾಡ್ಬರೀಸ್ ಡೈರಿ ಮಿಲ್ಕ್ – ಲಾಡು ಬಂದು ಬಾಯಿಗೆ ಬಿತ್ತಾ ಮಗ?’ (ಕ್ಯಾಡ್ಬರೀಸ್ ಡೈರಿ ಮಿಲ್ಕ್ ಜಾಹೀರಾತು)

ಪೂರ್ವಿ: ‘ಪಾಂಡಾ ರಂಗು ರಂಗು ಯಾಕಿದೆ’?
ನಾನು: ??
ಪೂರ್ವಿ: ‘ಜೇಮ್ಸ್’ ತಿಂದು ಪಾಂಡಾ ರಂಗು ರಂಗಾಗಿದೆ. (Gems ಜಾಹೀರಾತು)

ಇವತ್ತು ಮಸಾಲೆ ದೋಸೆ, ಆಲೂಗಡ್ಡೆ ಪಲ್ಯ

ತೋಟಕ್ಕೂ ನಾನೇ ಹೋಗೋದು..

Posted by: ರಮ್ಯ | June 3, 2011

ಹೀಗೊಂದು ‘ನೋಟೀಸ್’

ಇಲ್ಲಿ ಅಪಾರ್ಟ್ಮೆಂಟ್ ನವರು ಏನಾದರು ಸೂಚನೆ ಕೊಡುವುದಿದ್ದರೆ ಪ್ರತಿಮನೆಗೂ ಪ್ರತ್ಯೇಕವಾಗಿ ಲೆಟರ್ ಕಳಿಸುತ್ತಾರೆ. ಇವತ್ತು ಬಂದ ‘ನೋಟೀಸ್’ ಹೀಗಿತ್ತು. smile emoticon

೨-೩ ನಿಮಿಷ?.... :-)

ಯಾವಾಗಲೂ ‘ಗೋ ಗ್ರೀನ್.. ರಿಸೈಕಲ್….ರೀಯೂಸ್’ ಎನ್ನುವ ಇವರು ಸುಮಾರು ೪೦೦ ಮನೆಗಳಿಗೆ ಇದನ್ಯಾಕೆ ಹಂಚಿದರೋ ಅರ್ಥವಾಗಲಿಲ್ಲ. sad emoticon
Posted by: ರಮ್ಯ | April 28, 2011

ಭೀಮನ ‘ಮೀಸೆ’

ನಾನಾಗ ೬ನೇ ತರಗತಿಯಲ್ಲಿದ್ದೆ. ಸಮೀಪದ ಪ್ರೌಡಶಾಲೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರಸಪ್ರಶ್ನೆ, ಪ್ರಬಂಧ, ಭಾವಗೀತೆ ಮೊದಲಾದ ಸ್ಪರ್ಧೆಗಳು ನಡೆಯುತ್ತಿದ್ದವು. ಸುತ್ತಮುತ್ತಲಿನ ಸುಮಾರು ೮-೧೦ ಶಾಲೆಗಳ ಮಕ್ಕಳು ಇದರಲ್ಲಿ ಭಾಗವಹಿಸುತ್ತಿದ್ದರು. ಕೊನೆಯ ೩ ದಿನಗಳು ಮಕ್ಕಳ ನಾಟಕೋತ್ಸವ ನಡೆಯುತ್ತಿತ್ತು.

ನಾಟಕಕ್ಕಾಗಿ ನಮ್ಮ ತಯಾರಿ ಜೋರಾಗಿಯೇ ನಡೆದಿತ್ತು. ಭೀಮ ದ್ರೌಪದಿಗಾಗಿ ಸೌಗಂದಿಕಾ ಪುಷ್ಪವನ್ನು ಹುಡುಕಿಕೊಂಡು ಹೋಗುವ ಸಂದರ್ಭವನ್ನು ಕೇಂದ್ರವಾಗಿಟ್ಟು ಬರೆದ ನಾಟಕ. ನಾನೇ ಭೀಮನ ಪಾತ್ರಧಾರಿ. ನಾಟಕವೇನೋ ಚೆನ್ನಾಗಿಯೇ ಆಯ್ತು.

ಭೀಮನ ಗೆಟಪ್ಪಿನಲ್ಲಿ......

ಆಗಲೇ ರಾತ್ರಿ ೧೦ ಗಂಟೆ ಆಗಿತ್ತು. ಭೀಮನ ಮೆಕಪ್ಪಿನಲ್ಲೇ ಮನೆ ತಲುಪಿದ್ದೆ. ಮನೆಗೆ ಹೋಗಿ ಮೇಕಪ್ ತೆಗೆದಾಗಲೇ ಆದ ಆವಾಂತರದ ಅರಿವಾಗಿದ್ದು.sad emoticon ಮೀಸೆ ಹಚ್ಚಲು ಉಪಯೋಗಿಸಿದ ಕೆಮಿಕಲ್ ತನ್ನ ಕೆಲಸ ಮಾಡಿತ್ತು. ಮೀಸೆ ಹಚ್ಚಿದಷ್ಟು ಜಾಗ ಸುಟ್ಟ ಗಾಯವಾಗಿತ್ತು. ಆ ಗಾಯ ಮುಖದಿಂದ ಮಾಯವಾಗಲು ಸುಮಾರು ೨ ತಿಂಗಳು ಹಿಡಿದಿತ್ತು. ಈ ಘಟನೆಯ ನಂತರ ಮುಖಕ್ಕೆ ಏನಾದರು ಹಚ್ಚುವಾಗ ೧೦೦ ಬಾರಿ ಯೋಚಿಸ್ತೀನಿ.smile emoticon

ಮಾನ್ಯರೆ,

ಈ ಪತ್ರವನ್ನು ಅತ್ಯಂತ ನೋವು, ವಿಷಾದ, ಕಳವಳದಿಂದ ನಿಮಗೆ ಬರೆಯುತ್ತಿದ್ದೇವೆ. ಪತ್ರ ಓದಿದ ನಂತರವಾದರೂ ನೀವು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತೀರೆಂಬ ನಂಬಿಕೆ ಇದೆ. ಲಕ್ಷ-ಕೋಟಿ ಜನರನ್ನು ತಲುಪುವ ಮೀಡಿಯಾಗಳು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಇದು ಕಾನೂನಿನ ಪರಿಭಾಷೆಗಳಿಗೆ ಮಾತ್ರ ಒಳಪಡುವ ವಿಷಯ ಎಂದು ಯಾರೂ ಭಾವಿಸಬೇಕಾಗಿಲ್ಲ, ಕಾನೂನನ್ನೂ ಮೀರಿದ ನೈತಿಕತೆ, ಮಾನವೀಯತೆಯ ಹೊಣೆಗಾರಿಕೆಯನ್ನೂ ಒಪ್ಪಿ ಅನುಸರಿಸಬೇಕಾಗುತ್ತದೆ. ತಾವು ಇಡೀ ಪತ್ರವನ್ನು ಓದಿ, ಸೂಕ್ತ, ಅತ್ಯಗತ್ಯ, ಸಕಾಲಿಕ ನಿರ್ಧಾರಕ್ಕೆ ಬರುವಿರೆಂಬ ನಂಬುಗೆ ನಮಗಿದೆ.ನಮ್ಮ ತಕರಾರು, ಸಿಟ್ಟು, ಆತಂಕ ಇರುವುದು ನಿಮ್ಮ ವಾಹಿನಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ೯ ಗಂಟೆಗೆ ಪ್ರಸಾರವಾಗುವ ಬೃಹತ್ ಬ್ರಹ್ಮಾಂಡ ಎಂಬ ಜ್ಯೋತಿಷ್ಯ ಸಂಬಂಧಿ ಕಾರ್ಯಕ್ರಮದ ಕುರಿತು. ಈ ಕಾರ್ಯಕ್ರಮವನ್ನು ನಡೆಸಿಕೊಡುವವರು ಶ್ರೀ ನರೇಂದ್ರ ಬಾಬು ಶರ್ಮ ಎಂಬುವವರು. ಇವರು ನಿಮ್ಮ ಚಾನಲ್‌ನಲ್ಲಿ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಮುನ್ನ ಸುವರ್ಣ ವಾಹಿನಿಯಲ್ಲಿ ಭವ್ಯ ಬ್ರಹ್ಮಾಂಡ ಎಂಬ ಹೆಸರಿನಲ್ಲಿ, ಅದಕ್ಕೂ ಮುನ್ನ ಕಸ್ತೂರಿ ವಾಹಿನಿಯಲ್ಲಿ ಬ್ರಹ್ಮಾಂಡ ಎಂಬ ಹೆಸರಿನಲ್ಲಿ ಇದೇ ಸ್ವರೂಪದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಬಹಳಷ್ಟು ಜನರಿಗೆ ಗೊತ್ತಿರುವ ಪ್ರಕಾರ ತೀರಾ ಇತ್ತೀಚಿನವರೆಗೆ ನರೇಂದ್ರ ಶರ್ಮ ಅವರು ಕನ್ನಡ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿದ್ದವರು.

ನರೇಂದ್ರ ಶರ್ಮ ಅವರು ಕಸ್ತೂರಿ ವಾಹಿನಿ ಹಾಗು ಸುವರ್ಣ ವಾಹಿನಿಗಳಲ್ಲಿ ಬ್ರಹ್ಮಾಂಡ ನಡೆಸುತ್ತಿದ್ದಾಗಲೇ ಅವರು ಬಳಸುವ ಭಾಷೆ, ಹೇಳುವ ಹಸಿಹಸಿ ಸುಳ್ಳುಗಳು ಮಾನವಂತರ, ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರನ್ನು ವಿನಾಕಾರಣ ನಿಂದಿಸುವುದು-ಅವಹೇಳನ ಮಾಡುವುದು, ಕೆಳಜಾತಿಯ ಜನರನ್ನು ಗುರಿಪಡಿಸಿ ತಿರಸ್ಕಾರದಿಂದ ಮಾತನಾಡಿ ಅಪಮಾನಿಸುವುದು, ಜ್ಯೋತಿಷ್ಯದ ಹೆಸರಿನಲ್ಲಿ ಸುಳ್ಳುಗಳ ಕಂತೆ ಕಟ್ಟಿ ಜನರನ್ನು ಬೆದರಿಸುವುದು ಇವರು ಹಿಂದಿನಿಂದ ಮಾಡಿಕೊಂಡು ಬಂದಿರುವ ಕೆಲಸ. ಅದನ್ನು ಅವರು ನಿಮ್ಮ ಜೀ ವಾಹಿನಿಯಲ್ಲೂ ಮಾಡುತ್ತಿದ್ದಾರೆ ಹಾಗು ಅದು ಈಗ ಅತಿರೇಕಕ್ಕೆ ತಲುಪಿದೆ.

ನಿಮ್ಮ ಜೀ ವಾಹಿನಿಯ ವೇದಿಕೆಯನ್ನು ಬಳಸಿಕೊಂಡು ನರೇಂದ್ರ ಶರ್ಮ ಏನೇನು ಮಾತನಾಡಿದ್ದಾರೆ ಎಂಬುದಕ್ಕೆ ಕೆಲವು ಸ್ಯಾಂಪಲ್‌ಗಳನ್ನು ಇಲ್ಲಿ ಒದಗಿಸುತ್ತಿದ್ದೇವೆ. ದಯವಿಟ್ಟು ಗಮನವಿಟ್ಟು ಓದಬೇಕಾಗಿ ವಿನಂತಿ.

೧. ನಾನು ಜಗನ್ಮಾತೆಯ ಪುತ್ರ. ಆಕೆ ಮೇ.೧೨ರಂದು ಭೂಮಿಗೆ ಬರುತ್ತಿದ್ದಾಳೆ. ಬಂದವಳು ಭೂಮಿಯನ್ನು ನಾಶಪಡಿಸುತ್ತಾಳೆ. ನಾನು ಇದನ್ನು ಘೋಷಿಸಿರುವುದರಿಂದ, ಜಗನ್ಮಾತೆ ನನ್ನ ಮಾತು ಉಳಿಸುವ ದೃಷ್ಟಿಯಿಂದಲಾದರೂ ಪ್ರಳಯ ನಡೆಸುತ್ತಾಳೆ.

೨. ಕರ್ನಾಟಕದ ಯಾವ ದೇವಸ್ಥಾನಗಳಲ್ಲೂ ದೇವರಿಲ್ಲ. ಕರ್ನಾಟಕದಲ್ಲಿ ಸಾಧು ಸಂತರು ಮಾತ್ರ ಇದ್ದಾರೆ. ದೇವರು ಇರುವುದೆಲ್ಲ ತಮಿಳುನಾಡಿನಲ್ಲಿ. ಅಲ್ಲಿನ ಧರ್ಮಕ್ಷೇತ್ರಗಳಲ್ಲಿ. ಹಾಗಾಗಿ ನಾನು ತಮಿಳುನಾಡಿನ ದೇವಸ್ಥಾನಗಳಿಗೆ ಹೋಗುವಂತೆ ಭಕ್ತರಿಗೆ ಹೇಳುತ್ತೇನೆ.

೩. ಹೆಣ್ಣು ಮಕ್ಕಳು ನೈಟಿ ತೊಡಬಾರದು. ಸಲ್ವಾರ್ ಕಮೀಜ್ ಹಾಕಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ. ರಾತ್ರಿ ಗಂಡನ ಜತೆ ಮಲಗಿ ಬೆಳಿಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋಗಬಾರದು. ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಲಕ್ಷಣ. ಅಗಲವಾದ ಬಿಂದಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಬೂಬಮ್ಮಗಳ ಹಾಗೆ ಕಾಣುತ್ತೀರಿ. (ಬೂಬಮ್ಮ ಎಂದರೆ ಮುಸ್ಲಿಂ ಹೆಂಗಸು)

೪. ಬೆಳಿಗ್ಗೆ ಎದ್ದ ಕೂಡಲೇ ಪೊರಕೆಯನ್ನು, ಹಜಾಮರ ಮುಖವನ್ನು ನೋಡಬಾರದು. ನೋಡಿದರೆ ಕೆಟ್ಟದಾಗುತ್ತದೆ.

೫. ಇಡೀ ಜಗತ್ತು ಮುಳುಗಿ ಹೋಗುತ್ತದೆ, ಬೆಳಗಾವಿಯ ಒಂದು ಹಳ್ಳಿ ಮಾತ್ರ ಉಳಿದುಕೊಳ್ಳುತ್ತದೆ. ಪಾಪಿಗಳು ಮಾಡಿದ ತಪ್ಪಿಗಾಗಿ ಪಾಪಿಗಳಲ್ಲದವರೂ ನಾಶವಾಗುತ್ತಾರೆ.

೬. ಹಾವು ಎಂದರೆ ದೇವರು. ಜಪಾನ್ ದೇಶದವರು ಹಾವು ತಿನ್ನುತ್ತಾರೆ, ಅದಕ್ಕೆ ಸುನಾಮಿ ಬಂದಿದ್ದು.

ಇವು ಕೆಲವು ಸ್ಯಾಂಪಲ್‌ಗಳು ಮಾತ್ರ. ಈತನ ಇನ್ನಷ್ಟು ಭಯಾನಕ ಉಪದೇಶಗಳ ಕುರಿತು ಈ ಹಿಂದೆ ಇದೇ ಬ್ಲಾಗ್ ನಲ್ಲಿ ಪ್ರಸ್ತಾಪಿಸಿದ್ದೇವೆ. ಒಮ್ಮೆ ಓದಿ ನೋಡಲು ವಿನಂತಿ.  ಈ ಬಗೆಯ ದುರ್ಬೋಧನೆಗಳನ್ನು ನೀಚಾತಿನೀಚರಷ್ಟೆ ಸಮರ್ಥಿಸಿಕೊಳ್ಳಬಹುದು. ಹೀಗಾಗಿ ನೀವು ಇವುಗಳನ್ನೆಲ್ಲ ಒಪ್ಪಲಾರಿರಿ ಎಂದು ನಮ್ಮ ನಂಬಿಕೆ. ನರೇಂದ್ರ ಶರ್ಮ ಬಳಸುವ ಭಾಷೆ ಎಷ್ಟು ಕೊಳಕಾಗಿದೆಯೆಂದರೆ ಆತ ಪದೇಪದೇ ಮುಂಡೇವು, ಮುಂಡೆ (ಗಂಡ ಸತ್ತ ಹೆಂಗಸು), ಕಳ್ ನನ್ ಮಕ್ಕಳು, ಗೂಬೆ, ಗುಗ್ಗು, ದರಿದ್ರದವು.. ಇತ್ಯಾದಿ ಪದಗಳನ್ನೇ ಬಳಸುತ್ತಾರೆ. ವೇದೋಪನಿಷತ್ತುಗಳನ್ನು ಓದಿದ ವ್ಯಕ್ತಿ ಇಷ್ಟು ಅಸಭ್ಯವಾದ ಭಾಷೆಯಲ್ಲಿ ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವೇ?

ಕಪಟ ಜ್ಯೋತಿಷಿಗಳು ಹರಡುವ ಮೂಢನಂಬಿಕೆಗಳ ಕುರಿತು ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದರು:

 ಜ್ಯೋತಿಷ್ಯ ಮುಂತಾದುವನ್ನು ಹೇಳಿ ಉದರಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಕೂಡದು ಎನ್ನುವನು ಬುದ್ಧ. ಅವನಿಗೆ ಇದರ ರಹಸ್ಯ ಚೆನ್ನಾಗಿ ಗೊತ್ತಾಗಿರಬೇಕು. ತಾರೆಯೊಂದು ನನ್ನ ಜೀವನದ ಮೇಲೆ ತನ್ನ ಪ್ರಭಾವವನ್ನು ಬೀರಿ ವ್ಯಥೆಯನ್ನು ತಂದರೆ ನನ್ನ ಜೀವನ ಕುರುಡು ಕಾಸಿಗೂ ಯೋಗ್ಯವಲ್ಲ. ಜ್ಯೋತಿಷ್ಯ ಮುಂತಾದ ರಹಸ್ಯಗಳನ್ನೆಲ್ಲಾ ನೆಚ್ಚುವುದು ದೌರ್ಬಲ್ಯದ ಚಿಹ್ನೆ. ಈ ಸ್ವಭಾವ ನಿಮ್ಮ ಮನಸ್ಸಿನಲ್ಲಿ ಬಲವಾಗುತ್ತಿದ್ದರೆ ನೀವು ಒಬ್ಬ ವೈದ್ಯನನ್ನು ನೋಡಿ; ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿ….. ಜ್ಯೋತಿಷ್ಯ ಮುಂತಾದವುಗಳಲ್ಲೆಲ್ಲಾ ಸ್ವಲ್ಪ ಸತ್ಯಾಂಶವಿದ್ದರೂ ಅದನ್ನು ನಾವು ನಿರ್ಲಕ್ಷ್ಯದಿಂದ ನೋಡಬೇಕು….. ಮೂಢಭಾವನೆಗಳು ನಾಯಿಕೊಡೆಯಂತೆ ನಮ್ಮ ದೇಶದಲ್ಲಿ ಹಬ್ಬುತ್ತಿವೆ. ವಿಚಾರ ಮಾಡದ ಸ್ತ್ರೀಯರು ಇನ್ನೂ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವರು. ಒಬ್ಬ ಹಣಕ್ಕಾಗಿ ಮತ್ತೊಬ್ಬರನ್ನು ಮೋಸ ಮಾಡಿದರೆ ಅವನನ್ನು ಮೋಸಗಾರ ಎನ್ನುವಿರಿ. ಇತರರನ್ನು ಅಧ್ಯಾತ್ಮಿಕ ದೃಷ್ಟಿಯಿಂದ ಪಾಪಿಗಳು ಎಂದು ಮೋಸಗೊಳಿಸುವವರು ಎಂತಹ ಪಾಪಿಗಳಿರಬೇಕು? ಇದು ಪರಮಪಾತಕ. ಸತ್ಯ ನಿಮ್ಮನ್ನು ಧೀರರನ್ನಾಗಿ ಮಾಡಬೇಕು; ಮೌಢ್ಯತೆಯಿಂದ ಪಾರಾಗುವಂತೆ ಮಾಡಬೇಕು. ಇದೇ ಸತ್ಯದ ಪರೀಕ್ಷೆ…. ಬೇಕಾದರೆ ತಾರೆಗಳನ್ನು ನಿಮ್ಮ ಬೊಗಸೆಯಿಂದ ಎತ್ತಿ ನುಂಗಿಹಾಕಬಹುದು. ನಿಮ್ಮ ನೈಜಸ್ವಭಾವ ಅಂತಹುದು. ಧೀರರಾಗಿ, ಎಲ್ಲಾ ವಿಧದ ಮೂಢನಂಬಿಕೆಗಳಿಂದ ಪಾರಾಗಿ, ಮುಕ್ತರಾಗಿ.

ಇವತ್ತು ನಿಮ್ಮ ಚಾನಲ್ ಮೂಲಕ ನರೇಂದ್ರ ಶರ್ಮ ಅವರು ಇಡೀ ಕರ್ನಾಟಕವನ್ನು ಮೌಢ್ಯದಲ್ಲಿ ಮುಳುಗಿಸಲು ಯತ್ನಿಸುತ್ತಿದ್ದಾರೆ. ಅಮೆರಿಕದ ಕೆಲವು ಸ್ವತಂತ್ರ ಕ್ರಿಶ್ಚಿಯನ್ ಗುಂಪುಗಳು ಹರಡುತ್ತಿರುವ ಪ್ರಳಯದ ಥಿಯರಿಗಳನ್ನೇ (http://www.coffetoday.com/the-doomsday-is-on-may-21-2011/907618/

http://www.ebiblefellowship.com/may21/

http://en.wikipedia.org/wiki/Harold_Camping

http://www.allvoices.com/contributed-news/8599025-worlds-doomsday-fixed-for-6-pm-on-21st-may-2011)  ಕದ್ದು ತಂದು, ಅವುಗಳನ್ನು ಜಗನ್ಮಾತೆಯ ಹೆಸರಿನಲ್ಲಿ ಬದಲಾಯಿಸಿ, ಈ ವರ್ಷವೇ ಪ್ರಳಯವಾಗುತ್ತದೆ ಎಂದು ಭೀತಿ ಸೃಷ್ಟಿಸುತ್ತಿದ್ದಾರೆ. ಪ್ರಳಯವನ್ನು ತಪ್ಪಿಸಲು ಸಾಧ್ಯವಿರುವುದು ನನಗೆ ಮಾತ್ರ, ಹೀಗಾಗಿ ನಾನು ಹೇಳಿದಂತೆ ಕೇಳಿ ಎಂದು ಜನರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಹಿಂದೆ ಕಸ್ತೂರಿ ವಾಹಿನಿಯಲ್ಲಿದ್ದಾಗ ಸಹ ಲೋಕ ಕಲ್ಯಾಣ, ಇತ್ಯಾದಿ ಬೊಗಳೆ  ಮಾತುಗಳನ್ನು ಹೇಳಿ ಅರಮನೆ ಮೈದಾನದಲ್ಲಿ ದೊಡ್ಡ ಯಾಗವೊಂದನ್ನು ನಡೆಸಿದ ನರೇಂದ್ರ ಶರ್ಮ ಅವರು ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ಮುಗ್ಧ, ಅಮಾಯಕ ಜನಸಾಮಾನ್ಯರಿಂದ ಪಡೆದಿದ್ದರು. ಎಷ್ಟು ಹಣ ಪಡೆದಿದ್ದೀರಿ, ಸ್ವಲ್ಪ ಲೆಕ್ಕ ಕೊಡಿ ಎಂದು ಪತ್ರಕರ್ತರು ಪತ್ರಿಕಾಗೋಷ್ಠಿಯೊಂದರಲ್ಲಿ ಕೇಳಿದಾಗ ನರೇಂದ್ರ ಶರ್ಮ ಗೋಷ್ಠಿಯನ್ನೇ ನಿಲ್ಲಿಸಿ ಹೊರಟುಹೋಗಿದ್ದರು. ನರೇಂದ್ರ ಶರ್ಮ ಅವರು ಸಾರ್ವಜನಿಕರ ದೇಣಿಗೆ ಪಡೆಯಲೆಂದೇ ಎರಡು ಟ್ರಸ್ಟ್‌ಗಳನ್ನು ರಚಿಸಿಕೊಂಡಿದ್ದಾರೆ. ಈ ಟ್ರಸ್ಟ್‌ಗಳಿಗೂ ನಿಮ್ಮ ಚಾನಲ್‌ಗಳಿಗೂ ಯಾವ ಸಂಬಂಧವಿರುವುದಿಲ್ಲ. ಪ್ರಚಾರಕ್ಕೆ ನಿಮ್ಮ ಚಾನಲ್‌ಗಳು, ಹಣ ವಸೂಲಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಟ್ರಸ್ಟ್‌ಗಳು! ಈ ದುರ್ ವ್ಯವಹಾರ ನಿಲ್ಲಿಸಲು ನೀವು ಹೇಳಿದರೆ, ಅವರು ಚಾನಲ್ ಬದಲಾಯಿಸುತ್ತಾರೆ.  ಬ್ರಹ್ಮಾಂಡ, ಭವ್ಯ ಬ್ರಹ್ಮಾಂಡ, ಬೃಹತ್ ಬ್ರಹ್ಮಾಂಡ ಆಯಿತು, ಇನ್ನು ಸೂಪರ್ ಬ್ರಹ್ಮಾಂಡ ಸೃಷ್ಟಿಯಾಗಬಹುದು ಅಷ್ಟೆ.

ಇಂಥ ಕಾರ್ಯಕ್ರಮ ಬೇಕೆ ಎಂದು ನೀವು ಯೋಚಿಸಲೇಬೇಕಾದ ಸಮಯವಿದು. ನಿಜ, ಈ ಕಾರ್ಯಕ್ರಮದಿಂದ ನಿಮಗೆ ಟಿಆರ್‌ಪಿ ಹೆಚ್ಚಾಗಿರಬಹುದು. ಆದರೆ ಜನ ಹೆಚ್ಚು ನೋಡುತ್ತಾರೆ ಎಂಬ ಕಾರಣಕ್ಕೆ ಅದು ಶ್ರೇಷ್ಠವಾದ ಕಾರ್ಯಕ್ರಮ ಎಂದು ಭಾವಿಸುವುದು ಮೂರ್ಖತನ. ಬೀದಿಯಲ್ಲಿ ಒಬ್ಬ ಹುಚ್ಚ ವಿಚಿತ್ರವಾಗಿ ಮಾತನಾಡುತ್ತ, ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದರೆ ಆತನನ್ನು ಎಲ್ಲರೂ ನೋಡುತ್ತಾರೆ. ಮಾಮೂಲಿಯಂತೆ ಓಡಾಡುವ ನಮ್ಮ, ನಿಮ್ಮನ್ನು ಯಾರೂ ಗಮನಿಸುವುದಿಲ್ಲ. ಎಲ್ಲರೂ ನೋಡುತ್ತಾರೆ ಅನ್ನುವ ಕಾರಣಕ್ಕೆ ಬೆತ್ತಲೆ ಹುಚ್ಚನನ್ನು ಪ್ರೋತ್ಸಾಹಿಸುವುದು ಸರಿಯೇ? ಬೆತ್ತಲೆ ಓಡಾಡುವ ಹುಚ್ಚನಿಗೆ ಬಟ್ಟೆ ಕೊಡಿಸಿ, ಯಾವುದಾದರೂ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಬೇಕೇ ಹೊರತು, ಹುಚ್ಚನೇ ಶ್ರೇಷ್ಠ ಎಂದು ಭಾವಿಸಬೇಕಾಗಿಲ್ಲ. ಒಬ್ಬ ಹುಚ್ಚನನ್ನು ಸಹಿಸಿಕೊಂಡ ಪರಿಣಾಮ ಈಗ ಬೀದಿ ತುಂಬ ಹುಚ್ಚರು ಸೇರಿಬಿಡುತ್ತಾರೆ. ಆ ಅಪಾಯವನ್ನೂ ನಾವು ಎದುರಿಸುತ್ತಿದ್ದೇವೆ.

ಇದೆಲ್ಲವನ್ನೂ ಗಮನಿಸಿ ತಾವು ದಯಮಾಡಿ ನರೇಂದ್ರ ಶರ್ಮ ಅವರ ಬ್ರಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ಈಗಿಂದೀಗಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸುತ್ತೇವೆ. ಈ ಕಾರ್ಯಕ್ರಮ ಅನೈತಿಕ, ಅಪ್ರಜಾಸತ್ತಾತ್ಮಕ, ಮಾನವ ವಿರೋಧಿಯಾಗಿದೆ.

ಇದನ್ನು ನಾವು ನಿಮ್ಮ ಬೇಡಿಕೆ ಎಂದು ಹೇಳುತ್ತಿಲ್ಲ, ಆಗ್ರಹ ಎಂದೇ ಹೇಳುತ್ತಿದ್ದೇವೆ. ಯಾಕೆಂದರೆ ಇದು ಕಾನೂನು ಪ್ರಕಾರವೂ ಅಪರಾಧ. ನೀವು ಹಾಗು ನರೇಂದ್ರ ಶರ್ಮ ಸರ್ಕಾರ ರಚಿಸಿರುವ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟ.

ನಿಮಗೆ ಚೆನ್ನಾಗಿ ಗೊತ್ತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ಸಿದ್ಧಪಡಿಸಿರುವ ಮಾರ್ಗಸೂಚಿಗಳನ್ನು ನೀವು ತಪ್ಪದೇ ಪಾಲಿಸಬೇಕು. ಮಾರ್ಗಸೂಚಿಗಳನ್ನು ಅಲಕ್ಷ್ಯ ಮಾಡಿದ ಎಂಟಿವಿ, ಟಿವಿ೫ ಮುಂತಾದ ಚಾನಲ್‌ಗಳನ್ನು ಶಿಕ್ಷಿಸಲಾಗಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಒಟ್ಟು ೧೩ ವಿವಿಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ತಮಗೆ ಕಾನೂನಿನ ಹೊಣೆಗಾರಿಕೆಯೂ ಇದೆ. ಅವುಗಳನ್ನು ನಿಮಗೆ ನೆನಪಿಸಲು ಯತ್ನಿಸುತ್ತೇವೆ.

ಕಾಯ್ದೆಗಳು ಹೀಗಿವೆ.

1. Cable Television Network (Regulation) Act, 1995 and Certification Rules there under.
2. Drugs and Cosmetics Act, 1940.
3. Emblems and Names (Prevention of Improper Use) Act, 1950.
4. Drugs (Control) Act 1950.
5. Drugs and Magic Remedies (Objectionable Advertisements) Act, 1954.
6. Prevention of Food & Adulteration Act, 1954.
7. Prize Competitions Act, 1955.
8. Indecent Representation of Women (Prohibition) Act, 1986.
9. Trade and Merchandise Marks, Act 1999.
10. Copyright Act, 1957.
11. Cigarette and other Tobacco Products Act 2003.
12. Consumer Protection Act, 1986.
13. The Prevention of Cruelty to Animals Act, 1960

ಪ್ರಸಾರ ವೇಳೆ ಕಾನೂನು ಉಲ್ಲಂಘನೆಯನ್ನು ಮೂರು ಹಂತದಲ್ಲಿ ವಿಚಾರಣೆಗೆ ಒಳಪಡಿಸಬಹುದು. ಮೂರನೆ ಹಂತದಲ್ಲಿ ಸರಕಾರ ನೇಮಿಸಿದ ಸಮಿತಿ ಚಾನೆಲ್ ಮುಖ್ಯಸ್ಥ ತಪ್ಪಿತಸ್ಥ ಎಂದು ಕಂಡುಬಂದರೆ, ಪ್ರಸ್ತುತ ಕಾರ್ಯಕ್ರಮವನ್ನು ಪ್ರಸರಣ ಮಾಡದಂತೆ ನಿರ್ದೇಶಿಸಬಹುದು, ಕ್ಷಮಾಪಣೆಯನ್ನು ಬಿತ್ತರಿಸುವಂತೆ ಹೇಳಬಹುದು ಹಾಗೂ ದಂಡ ವಿದಿಸಬಹುದು. ಈ ಪ್ರಕ್ರಿಯೆಗೆ ದೂರು ದಾಖಲಿಸುವುದು ಮುಖ್ಯ.ಮಾರ್ಗಸೂಚಿ ಸ್ಪಷ್ಟ ಮಾತುಗಳಲ್ಲಿ ಕಾರ್ಯಕ್ರಮಗಳಲ್ಲಿ ಅವಹೇಳನಕಾರಿ ಭಾಷೆ, ಜಾತಿ ನಿಂದನೆ, ಮೂಢನಂಬಿಕೆ ವೈಭವೀಕರಣ ಹಾಗೂ ಜನರನ್ನು ದಿಕ್ಕುತಪ್ಪಿಸುವುದನ್ನು ಖಂಡಿಸುತ್ತದೆ.

ಕಂಟೆಂಟ್ ಸರ್ಟಿಫಿಕೇಷನ್ ನಿಯಮಾವಳಿ ೨೦೦೮ ಪ್ರಕಾರ ಯಾವುದೇ ನಿರ್ದಿಷ್ಟ ಜಾತಿ, ಕೋಮು ಅಥವಾ ನಂಬಿಕೆ ವಿರುದ್ಧ ಮಾತನಾಡುವುದು ಅಪರಾಧ. ಜೊತೆಗೆ ಯಾವುದೇ ಒಂದು ಆಚರಣೆಯನ್ನು ಶ್ರೇಷ್ಠ ಅಥವಾ ಕನಿಷ್ಟ ಎಂದು ಬಿಂಬಿಸುವಂತಿಲ್ಲ. ಹಾಗೆಯೇ ಲಿಂಗ ಅಸಮಾನತೆಯನ್ನು ಹೇಳುವಂತಿಲ್ಲ.

ನಿಮ್ಮ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮ ಈ ಎಲ್ಲ ಕಾಯ್ದೆಗಳನ್ನು ಉಲ್ಲಂಘಿಸಿರುವುದು ಸ್ಪಷ್ಟ. ಈ ಕಾರ್ಯಕ್ರಮ ಸ್ತ್ರೀಯರನ್ನು ಕೆಟ್ಟದಾಗಿ ಚಿತ್ರಿಸುತ್ತದೆ. ಹಜಾಮರನ್ನು ನೋಡಬಾರದು ಎನ್ನುವ ಮೂಲಕ ಅಸ್ಪೃಶ್ಯತೆಯನ್ನು ಪ್ರಚಾರ ಮಾಡುತ್ತಿದೆ. ಜನರಲ್ಲಿ ಪ್ರಳಯದ ಭೀತಿಯನ್ನು ಸೃಷ್ಟಿಸುತ್ತಿದೆ. ಮಾಂಸಾಹಾರಿಗಳನ್ನು ಈತ ಕೀಳಾಗಿ ನಿಂದಿಸುವ ಮೂಲಕ ಜನಾಂಗೀಯ ನಿಂದನೆಯನ್ನು ಈ ಕಾರ್ಯಕ್ರಮ ಪೋಷಿಸುತ್ತಿದೆ.

ಭಾರತದ ಸಂವಿಧಾನವು ಜನರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗಬೇಕು ಎನ್ನುತ್ತದೆ. ಆಧುನಿಕ ಕಾಲಘಟ್ಟದಲ್ಲಿ ನಾವು ಇನ್ನೂ ಕಂದಾಚಾರಗಳ ನರಕದಲ್ಲೇ ಕೊಳೆಯುತ್ತಿದ್ದೇವೆ. ಈ ಕೆಟ್ಟ ಬೆಳವಣಿಗೆಯನ್ನು ಟಿವಿ ಚಾನಲ್ ಗಳು ನಿರಂತರವಾಗಿ ಪೋಷಿಸುತ್ತಿವೆ. ಈ ನಿಟ್ಟಿನಲ್ಲಿ ನಿಮ್ಮ ಚಾನಲ್ ಸೇರಿದಂತೆ ಎಲ್ಲ ಚಾನಲ್ ಗಳು ಟಿಆರ್ಪಿ ಆಸೆಗೆ ಬಲಿಬೀಳದೆ ಕಾಲದ ಅಗತ್ಯಕ್ಕೆ ತಕ್ಕಂಥ, ಮನುಷ್ಯರನ್ನು ಎಲ್ಲ ಮೌಢ್ಯಗಳಿಂದ ಬಿಡುಗಡೆಗೊಳಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಅಗತ್ಯವಿದೆ.

ಈ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸಬೇಕೆಂದು ಮತ್ತೊಮ್ಮೆ ಆಗ್ರಹಪಡಿಸುತ್ತೇವೆ. ಒಂದು ವೇಳೆ ನಿಲ್ಲಿಸದೇ ಹೋದಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ದೂರು ಸಲ್ಲಿಸುವುದೂ ಸೇರಿದಂತೆ, ಪ್ರಜಾಸತ್ತಾತ್ಮಕ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಧನ್ಯವಾದಗಳು.

ಓದುಗರಿಗೊಂದು ಮನವಿ: ದಯಮಾಡಿ ಈ ಪತ್ರದ ಧಾಟಿಯ ಪತ್ರಗಳನ್ನು ಅಥವಾ ಇದೇ ಪತ್ರವನ್ನು ನಿಮ್ಮ ಐಡಿಗಳಿಂದ  ಈ feedbackzeekannada@zeenetwork.com  ಇಮೇಲ್ ಅಥವಾ ಜೀ ಕನ್ನಡ, ನಂ.೩೯, ಯುನೈಟೆಡ್ ಮ್ಯಾನ್ಷನ್, ಮೂರನೇ ಮಹಡಿ, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು-೧ ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕಾಗಿ ವಿನಂತಿ. ಸಾಧ್ಯವಾಗುವುದಾದರೆ ಈ ಅಭಿಯಾನವನ್ನು ಬೆಂಬಲಿಸುವ ಬ್ಲಾಗರ್‌ಗಳು ಈ ಪತ್ರವನ್ನು ಯಥಾವತ್ತಾಗಿ ತಮ್ಮ ಬ್ಲಾಗ್‌ಗಳಲ್ಲಿ ಪ್ರಕಟಿಸಬೇಕೆಂದು ಕೋರುತ್ತೇವೆ. ಹಾಗೆಯೇ ಇದನ್ನು ಫೇಸ್‌ಬುಕ್ ಹಾಗು ಇತರ ಸೋಷಿಯಲ್ ನೆಟ್‌ವರ್ಕ್‌ಗಳಲ್ಲಿ ಶೇರ್ ಮಾಡಲು ವಿನಂತಿಸುತ್ತೇವೆ.

(ಇದು ಸಂಪಾದಕೀಯದಲ್ಲಿನ ಪತ್ರದ ನಕಲು)

Posted by: ರಮ್ಯ | April 15, 2011

ಕೆಲವು ಘಟನೆಗಳು….

ಘಟನೆ ೧:
ವಿಜಿ ಇಂಜಿನಿಯರಿಂಗ್ ಓದುತ್ತಿರುವ ಮಗಳೊಂದಿಗೆ ಸ್ಕಿನ್ ಸ್ಪೆಷಲಿಸ್ಟ್ ಬಳಿ ಹೋಗಿದ್ದಳು. ಸಿಡುಕು ಸ್ವಭಾವದ ಆ ಡಾಕ್ಟರ್ ಕೇಳಿದ ಮೊದಲ ಪ್ರಶ್ನೆ ‘ನೀವು ಹಳ್ಳಿಯವರಾ/ ಪೇಟೆಯವರಾ?’
ವಿಜಿ: ಹಳ್ಳಿಯವರು.
ಡಾ: ಹಳ್ಳಿಯವರಿಗೆ ನಾನು ಚಿಕಿತ್ಸೆ ನೀಡುವುದಿಲ್ಲ. ಈ ಕಾಯಿಲೆಯನ್ನು ವಾಸಿ ಮಾಡಲು ನನಗೆ ಒಂದೂವರೆ ವರ್ಷ ಬೇಕು. ನೀವು ಒಂದೂವರೆ ವರ್ಷ ಬರುತ್ತೀರಾ?
ಇವರು ತಮಗಿರುವ ಸಮಸ್ಯೆಯನ್ನು ಹೇಳುವುದಕ್ಕೂ ಮೊದಲೇ ಆ ಡಾಕ್ಟರಿಂದ ಇಷ್ಟೆಲ್ಲಾ ಉಪದೇಶ ಆಗಿತ್ತು.

ಘಟನೆ ೨:
ರೀಟಾ ತನ್ನ ಮಗುವನ್ನು ಕರೆದುಕೊಂಡು ಚೈಲ್ಡ್ ಸ್ಪೆಷಲಿಸ್ಟ್ ಬಳಿಗೆ ಹೋಗಿದ್ದಳು. ಆ ಡಾಕ್ಟರ್ ತಮಗೆ ಗೊತ್ತಿರುವಷ್ಟನ್ನು ಆ ಮಗುವಿನ ಮೇಲೆ ಪ್ರಯೋಗಿಸಿ ಪರಿಸ್ಥಿತಿ ಕೈಮೀರಿದಾಗ ಜಿಲ್ಲಾ ಕೇಂದ್ರದಲ್ಲಿರುವ ಡಾಕ್ಟರ್ ಬಳಿಗೆ ಹೋಗಲು ಸೂಚಿಸಿದರು.

ಘಟನೆ ೩:
ಗರ್ಭ ಕೋಶದ ಆಪರೇಷನ್ ಮಾಡಿದ ಡಾಕ್ಟರ್ ದೊಡ್ಡ ಕರುಳನ್ನೂ ಸೇರಿಸಿ ಹೊಲಿಗೆ ಹಾಕಿದ್ದರು. ವಿಷಯ ತಿಳಿದು ಸುಮಾರು ೪ ಲಕ್ಷ ಖರ್ಚು ಮಾಡಿ, ಬೇರೆ ಕಡೆ ಚಿಕಿತ್ಸೆ ಕೊಡಿಸಿದಾಗ ಆ ಮಹಿಳೆ ಚೇತರಿಸಿಕೊಂಡರು. ಆಕೆಯ ಮನೆಯವರು ಡಾಕ್ಟರ್ ಮೇಲೆ ಕೇಸ್ ಹಾಕಿದಾಗ ‘ನಾನು ಆಕೆಗೆ ಆಪರೇಷನ್ ಮಾಡಿಯೇ ಇಲ್ಲ’ ಎಂದು ಅವರು ಬಚಾವ್ ಆದರು.

ಘಟನೆ ೪:
ಆಕ್ಸಿಡೆಂಟ್ ಆಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವೃದ್ದ ನನ್ನು ಆತ ಪ್ರಥಮ ಚಿಕಿತ್ಸೆಗಾಗಿ ಸಮೀಪದ ಪ್ರೈವೇಟ್ ಕ್ಲಿನಿಕ್ ಗೆ ಕರೆದೊಯ್ದಿದ್ದ. ‘ಆಕ್ಸಿಡೆಂಟ್ ಕೇಸನ್ನು ನಾನು ತೆಗೆದುಕೊಳ್ಳುವುದಿಲ್ಲ. ಸರ್ಕಾರಿ ಆಸ್ಪತ್ರೆಗೆ ಹೋಗಿ’ ಎಂದಿದ್ದರು ಡಾಕ್ಟರ್.
(ಆಕ್ಸಿಡೆಂಟ್ ಕೇಸ್ ಗಳನ್ನು ಪ್ರೈವೇಟ್ ಡಾಕ್ಟರ್ ಅಟೆಂಡ್ ಮಾಡಬಹುದು ಎಂದು ಕಾನೂನು ತಿದ್ದುಪಡಿ ಆಗಿದ್ರೂ ಸಹ..)

ಘಟನೆ ೫:
ಡಾಕ್ಟರ್(ರೋಗಿಗೆ): ಆ ಡಾಕ್ಟರ್(ಪ್ರತಿಸ್ಪರ್ಧಿ) ಹತ್ತಿರ ಹೋಗುವ ನೀವು ನನ್ನಲ್ಲಿಗೆ ಯಾಕೆ ಬಂದಿದ್ದೀರಿ?

ಘಟನೆ ೬:
ಗರ್ಭಿಣಿ ೮ ತಿಂಗಳಿಗೆ ಚೆಕಪ್ ಗೆ ಹೋದಾಗ ‘ಮಗುವಿನ ಹೆಡ್ ಫಿಕ್ಸ್ ಆಗಿದೆ’ ಎಂದು ಹೇಳಿದ ಡಾಕ್ಟರ್ ೧ ವಾರದ ನಂತರ ‘ಮಗುವಿನ ಹೆಡ್ ಇನ್ನೂ ಫಿಕ್ಸ್ ಆಗಿಲ್ಲ’ ಎಂದಿದ್ದರು. ಇವರಲ್ಲಿ ಆಕೆ ಎಷ್ಟರಮಟ್ಟಿಗೆ ನಂಬಿಕೆ ಇಡಬಹುದು?

ಘಟನೆ ೭:
ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಹಳ್ಳಿಯಿಂದ ಆಸ್ಪತ್ರೆಗೆ ಕರೆದೊಯ್ಯಲು ಆ ಬಡ ಕುಟುಂಬ ಅಂಬುಲೆನ್ಸ್ ನಂಬರ್ ೧೦೮ ಕ್ಕೆ ಕರೆ ಮಾಡಿದರು. ಅಂಬುಲೆನ್ಸ್ ಬರುವಷ್ಟರಲ್ಲಿ ಆಕೆಗೆ ಹೆರಿಗೆ ಆಗಿತ್ತು. ‘೧೦೮’ ವಾಪಸು ಕಳುಹಿಸಿದರೆ ಕೇಸ್ ಆಗುತ್ತದೆ ಎಂದು ಅವರಿಗೆ ಯಾರೋ ಹೇಳಿದ್ದರು. ಕಾನೂನಿನ ಅರಿವಿಲ್ಲದ ಅವರು ತಕ್ಷಣ ತಾಯಿ ಮತ್ತು ಮಗುವನ್ನು ಕರೆದುಕೊಂಡು ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಡಾಕ್ಟರ್ ರಜೆಯಲ್ಲಿದ್ದರಿಂದ ಜಿಲ್ಲಾ ಕೇಂದ್ರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಎಂದಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಹರಿಗೆಯಾಗದಿದ್ದರೆ ಹೆರಿಗೆ ಭತ್ಯೆ ಸಿಗುವುದಿಲ್ಲ. ಹಾಗೇ ಆ ಹಸಿ ಬಳಂತಿಯನ್ನು ೮೦ ಕಿ. ಮೀ. ದೂರದಲ್ಲಿರುವ ಜಿಲ್ಲಾ ಕೇಂದ್ರಕ್ಕೆ ಕರೆದುಕೊಂಡು ಹೋಗುವ ಶಕ್ತಿಯೂ ಅವರಲ್ಲಿರಲಿಲ್ಲ.

ಇವೆಲ್ಲ ಒಂದು ತಾಲೂಕು ಕೇಂದ್ರದ ಆಸ್ಪತ್ರೆಗಳಲ್ಲಿ ನಡೆದ ಘಟನೆಗಳು. ಮೇಲಿನ ಎಲ್ಲ ಘಟನೆಗಳಲ್ಲಿ ಮುಖ್ಯವಾಗಿ ಕಂಡುಬರುವುದು ರೋಗಿಗಳ ಅಸಹಾಯಕತೆ ಮತ್ತು ಅನಿವಾರ್ಯತೆ.
ಇದರೊಂದಿಗೆ ಡಾಕ್ಟರ್ ಗಳ ಬೇಜವಾಬ್ಧಾರಿ, ಹಣದಾಹ, ಮರೆಯಾಗುತ್ತಿರುವ ಮಾನವೀಯತೆ, ನೈತಿಕತೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ, ಕಾನೂನಿನ ಅರಿವಿನ ಕೊರತೆ ಕಾರಣವಾಗಿದೆ.

ಇಂತಹ ಡಾಕ್ಟರ ಗಳಲ್ಲಿ ರೋಗಿ ಯಾರಲ್ಲಿ ನಂಬಿಕೆ ಇಡಬಹುದು?

೨೮ ವರ್ಷಗಳ ನಂತರ ಭಾರತ ವಿಶ್ವ ಕಪ್ ಗೆದ್ದಿದೆ. ಧೋನಿ ಪಡೆಗೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ. ನಮ್ಮ ದೇಶದ ಕ್ರೀಡಾ ಪಟುಗಳಲ್ಲಿ ಕ್ರಿಕೆಟಿಗರೆ ಶ್ರೀಮಂತರು. ಜಾಹೀರಾತು & IPL ಗಳಿಂದ ಈಗಾಗಲೇ ಇವರುಗಳು ಕುಬೇರರಾಗಿದ್ದಾರೆ. ಈಗ ಬಹುಮಾನದ ಮೊತ್ತದೊಂದಿಗೆ, ಸರ್ಕಾರದಿಂದ ಕೋಟ್ಯಂತರ ರೂ. ಹಣ & ನಿವೇಶನಗಳ ಘೋಷಣೆಯಾಗಿದೆ. ಇನ್ನೂ ೪ ವರ್ಷ ಇದು ಮುಂದುವರೆದರೂ ಆಶ್ಚರ್ಯವಿಲ್ಲ.

ಕ್ರಿಕೆಟ್ ಭಾರತದ ರಾಷ್ಟ್ರ ಕ್ರೀಡೆ ಅಲ್ಲದಿದ್ದರೂ, ಭಾರತದಲ್ಲಿ ಪ್ರಸಿದ್ದ ಆಟ. ವಿಶ್ವಕಪ್ ಗೆದ್ದ ನಮ್ಮ ತಂಡವನ್ನು ಸನ್ಮಾನಿಸುವುದು, ಪ್ರೋತ್ಸಾಹಿಸುವುದು ತಪ್ಪಲ್ಲ. ಆದರೆ ಕೊಟ್ಯಾದೀಶರಾಗಿರುವ ಇವರಿಗೆ ಮತ್ತೆ ಕೋಟ್ಯಾಂತರ ರೂ ಗಳ ಹಣ, ನಿವೇಶನ ಗಳನ್ನು ಕೊಡುವುದು ಎಷ್ಟು ಸರಿ? ಇದರಿಂದ ಇತರ ಕ್ರೀಡೆ & ಕ್ರೀಡಾಪಟುಗಳನ್ನು ಕೇಳುವವರೇ ಇಲ್ಲದಂತಾಗಿದೆ. ಇಂದು ಬೇರೆ ಕ್ರೀಡೆ ಗಳನ್ನು ಉಳಿಸಿ, ಬೆಳೆಸುವ ಅಗತ್ಯವಿದೆ. ಕ್ರಿಕೆಟಿಗರಿಗೆ ಸಿಗುವ ಹಣ & ಪ್ರೋತ್ಸಾಹ (ಸ್ವಲ್ಪ ಭಾಗವಾದರೂ) ಇನ್ನಿತರ ಕ್ರೀಡೆಗಳಿಗೂ ಸಿಕ್ಕರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡುವುದರಲ್ಲಿ ಆಶ್ಚರ್ಯವಿಲ್ಲ.

ಪ್ರತಿದಿನ ಮನೆಯ ಹತ್ತಿರವಿರುವ ಪಾರ್ಕ್ ನಲ್ಲಿ ೧ ರೌಂಡ್ ವಾಕ್ ಹೋಗುವುದು ರೂಡಿ. ‘ಹಾಯ್’ ಹೇಳಿದವರಿಗೆ ‘ಹಾಯ್’ ಹೇಳಿ, ‘ಸ್ಮೈಲ್’ ಕೊಟ್ಟವರಿಗೆ ’ಸ್ಮೈಲ್’ ಕೊಡುವುದು ಬಿಟ್ಟರೆ ನಾನಾಗಿ ಬೇರೆಯವರನ್ನು ಪರಿಚಯ ಮಾಡಿಕೊಂಡಿದ್ದು ಅಪರೂಪ. ‘ಮಾತಾಡುತ್ತಾರೂ ಇಲ್ಲವೂ’ ಎಂಬ ಹಿಂಜರಿಕೆ.  ಹೀಗಿದ್ದರೂ  ಎಲ್ಲಾದರೂ ಅಪರೂಪಕ್ಕೆ ಅಂಗಡಿ, ಹೋಟೆಲ್ ಗಳಲ್ಲಿ ಕನ್ನಡದ ಮಾತು ಕೇಳಿದರೆ ನಾನಾಗಿ ಹೋಗಿ ಪರಿಚಯಿಸಿಕೊಳ್ಳುತ್ತೇನೆ.

ಮನೆಯ ಸಮೀಪದ ಪಾರ್ಕ್

ಪಾರ್ಕ್ ನಲ್ಲೊಂದು ಸಂಜೆ..

ಎಂದಿನಂತೆ ಪಾರ್ಕ್ ನಲ್ಲಿ ಹೋಗ್ತಾ ಇದ್ದೆ.

‘ನೀವು ಭಾರತದವರಾ?’ ಹಿಂದಿನಿಂದ ಕನ್ನಡದ ದ್ವನಿ. ಆಶ್ಚರ್ಯದಿಂದ ಹಿಂದಿರುಗಿ ನೋಡಿದೆ. ಸುಮಾರು ೫೦ರ ಆಸುಪಾಸಿನ ಮಹಿಳೆ. ‘ಹೌದು ಕನ್ನಡದವಳೇ’ ಕನ್ನಡದಲ್ಲೇ ಉತ್ತರಿಸಿದೆ.

೧೦ ನಿಮಿಷದಲ್ಲಿ ನನ್ನ ಕುಲ, ಗೋತ್ರ ಎಲ್ಲ ವಿಚಾರಿಸಿಯಾಗಿತ್ತು. ಹುಟ್ಟಿದ್ದು, ಕೊಟ್ಟಿದ್ದು, ಗಂಡ, ಮಕ್ಕಳು, ಕೆಲಸ ಹೀಗೆ ಸಾಗಿತ್ತು ವಿಚಾರಣೆ. ಅವರು ಬೆಂಗಳೂರಿನವರು. ಮಗನ ಮನೆಗೆ ಬಂದಿದ್ದರು. ನಾನು ಬೆಂಗಳೂರಿನಲ್ಲಿದ್ದಾಗ ಅವರ ಮನೆಗೆ ಸಮೀಪದಲ್ಲೇ ಇದ್ದೆ. ಹೀಗಾಗಿ ನಮ್ಮ ಏರಿಯದವಳೇ ಅಂತ ಅವರಿಗೆ ಸಂತೋಷವಾಗಿತ್ತು. ಪ್ರತಿದಿನ ಪಾರ್ಕ್ ನಲ್ಲಿ ನಮ್ಮ ಬೇಟಿಯಾಗುತ್ತಿತ್ತು.

ನಂತರ ಕೆಲವು ದಿನಗಳ ಕಾಲ ನಾನು ಪಾರ್ಕ್ ಗೆ ಹೋಗಲು ಆಗಲಿಲ್ಲ. ಪಾರ್ಕ್ ಗೆ ಹೋದಾಗ ಮತ್ತೆ ಆಂಟಿ ಯನ್ನು ಬೇಟಿ ಮಾಡಿದೆ. (ನನ್ನನ್ನು ಹುಡುಕಿಕೊಂಡು ನಮ್ಮ ಅಪಾರ್ಟ್ಮೆಂಟ್ ಗೂ ಬಂದಿದ್ದರಂತೆ. ಆದರೆ ನನ್ನ ಮನೆ ನಂಬರ್ ಅವರಿಗೆ ಗೊತ್ತಿರಲಿಲ್ಲ). ಅಲ್ಲಿ ಅವರೊಂದಿಗೆ ಇನ್ನೂ ಅನೇಕ ಜನರಿದ್ದರು. ಅವರೆಲ್ಲರಿಗೂ ನನ್ನನ್ನೂ, ನನಗೆ ಅವರೆಲ್ಲರನ್ನೂ ಪರಿಚಯ ಮಾಡಿಸಿದರು. ಇವರಿಗೆ ರಾಜಾಜಿನಗರ, ಇವರು ಜಯನಗರ, ಇವರು ತಮಿಳು ನಾಡಿನವರು, ಇವರು ಪಂಜಾಬ್ ನವರು ಹೀಗೆ ಸಾಗಿತ್ತು ಪರಿಚಯ. ಸುಮಾರು ೧೫ ದಿನಗಳಲ್ಲಿ ಅಲ್ಲೊಂದು ಪುಟ್ಟ ಭಾರತ ಸಂಘವೇ ಆಗಿತ್ತು.

ಅವರ ದೈರ್ಯ, ಸಂಗಟನಾ ಚಾತುರ್ಯಕ್ಕೆ ಮೆಚ್ಚಿದೆ. ಕನ್ನಡ ಬಿಟ್ಟು ಬೇರೇ ಭಾಷೆ ಗೊತ್ತಿರದ ಆಂಟಿ ಪಾರ್ಕ್ ಗೆ ಬಂದ ಎಲ್ಲರನ್ನೂ ಕನ್ನಡದಲ್ಲೇ ಪರಿಚಯ ಮಾಡಿಕೊಂಡಿದ್ದರು. ಇವರು ಕನ್ನಡದಲ್ಲಿ ಮಾತಾಡುವುದು, ಕನ್ನಡ ಬರದೇ ಇರುವವರು ಅವರ ಭಾಷೆ ಯಲ್ಲಿ ಉತ್ತರಿಸುವುದು ಸಾಮಾನ್ಯವಾಗಿತ್ತು. ಯಾರಿಗೆ ಎಷ್ಟು ಅರ್ಥವಾಗುತ್ತಿತ್ತೋ ಗೊತ್ತಿಲ್ಲ….smile

ಹೀಗೆ ಸುಮಾರು ೬ ತಿಂಗಳ ಕಾಲ ಪಾರ್ಕ್ ನಲ್ಲಿ ಕನ್ನಡದ ಕಂಪು ಹರಡುವಲ್ಲಿ ಅವರು ಯಶಸ್ವಿಯಾಗಿದ್ದರು. ಭಾರತಕ್ಕೆ ವಾಪಾಸಾಗುವ ಹಿಂದಿನ ದಿನ ಆಂಟಿ ಎಲ್ಲರ ಮನೆಗೂ ಬೇಟಿ ಕೊಟ್ಟಿದ್ದು ವಿಶೇಷವಾಗಿತ್ತು.

Older Posts »

Categories

Follow

Get every new post delivered to your Inbox.